Wednesday, 17 January 2018

ಜೆಡಿಎಸ್ ‌ಅಭಿಮಾನಿಗಳು ‌ಓದಲೇ ‌ಬೇಕಾದ ‌ದೇವೇಗೌಡರ ‌ವಿಶೇಷ ‌ಸಂದರ್ಶನ

ಸಿಎಂ ಸಿದ್ದರಾಮಯ್ಯ ಇಂಥ ದುರಾಡಳಿತ ನೀಡುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಒಂದು ಕಾಲದ ತಮ್ಮ ಒಡನಾಡಿ ವಿರುದ್ಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಕಿಡಿಕಾರಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಾದಂತೆ ರಾಷ್ಟ್ರೀಯ ಪಕ್ಷಗಳ ವರ್ತನೆ, ನದಿ ನೀರು ಹಂಚಿಕೆ ವಿವಾದ, ಪ್ರತ್ಯೇಕ ಧರ್ಮ ಹಾಗೂ ಯಜ್ಞ ಯಾಗಾದಿಗಳ ಕುರಿತು ಸಂದರ್ಶನದಲ್ಲಿ ಮಾರ್ವಿುಕವಾಗಿ ಮಾತನಾಡಿದ್ದು, ವಿಶ್ಲೇಷಣೆಗೊಳಪಡಿಸಿದರೆ ಅನೇಕ ಸಂದೇಶಗಳು ಅಡಕವಾಗಿರುವುದನ್ನು ಕಾಣಬಹುದು.# ಪಕ್ಷದ ನಾಯಕರೆಲ್ಲ ನಿಮ್ಮನ್ನು ಬಿಟ್ಟು ಹೋದಾಗ ನಿಮ್ಮ ಪರಿಸ್ಥಿತಿ ಹೇಗಿತ್ತು, ಆ ಸಂದರ್ಭ ಹೇಗೆ ಎದುರಿಸಿದ್ರಿ?

-ನಾನು ದೇವರನ್ನು ನಂಬಿದವನು. ಅದೆಲ್ಲ ದೇವರ ಆಟ, ಆ ಸಂದರ್ಭದಲ್ಲಿ ನಾನು ಅಂಜಲಿಲ್ಲ, ಎದೆಗುಂದಲಿಲ್ಲ. ಆದರೆ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ಕಣ್ಣೀರು ಹಾಕಿದ್ದೆ. ಲೋಕೋಪಯೋಗಿ ಸಚಿವನಾಗಿ ಒಂದು ರೂಪಾಯಿ ಮಾಡದ ನನಗೆ ಏಕೆ ಈ ಶಿಕ್ಷೆ ಕೊಟ್ಟೆ ಎಂದು ದೇವರಿಗೆ ಕೇಳಿದ್ದೆ. ಆಮೇಲೆ ಛಲದಿಂದ ಪಕ್ಷ ಕಟ್ಟಿದೆ, ದೇವೆಗೌಡರ ಕಥೆ ಮುಗಿತು ಎಂದು ಎಲ್ಲರು ಅಂದುಕೊಂಡಿದ್ರು. ಆದರೆ ಎಲ್ಲವನ್ನು ಧೈರ್ಯವಾಗಿ ಎದುರಿಸಿ ಪಕ್ಷ ಕಟ್ಟಿದೆ.

# ಪ್ರಾದೇಶಿಕ ಪಕ್ಷವಾದ ನೀವು ಎರಡು ರಾಷ್ಟ್ರೀಯ ಪಕ್ಷಗಳನ್ನು ಹೇಗೆ ಎದುರಿಸುತ್ತೀರಾ?

-ಕುಮಾರಸ್ವಾಮಿಯವರು ಈಗಾಗಲೇ ಮೈಸೂರಿನಿಂದ ವಿಕಾಸ ಯಾತ್ರೆ ಮೂಲಕ ಪ್ರವಾಸ ಆರಂಭಿಸಿದ್ದಾರೆ. ಅವರ ಯಾತ್ರೆಗೆ ಜನಬೆಂಬಲ ವ್ಯಕ್ತವಾಗ್ತಿದೆ. ನಾನು ಮತ್ತು ಕುಮಾರಸ್ವಾಮಿ ನೀಡಿದ ಆಡಳಿತವನ್ನು ಜನ ಮರೆತಿಲ್ಲ, ಜನ ಬೆಂಬಲಿಸುತ್ತಾರೆ ಅನ್ನುವ ಭರವಸೆಯಿದೆ. ಕಳೆದ ಬಾರಿ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಟ ಮಾಡಿದ್ರು, ಹೀಗಾಗಿ 40 ಸ್ಥಾನ ಬಂತು. ಆದರೆ ಈ ಬಾರಿ ನಮ್ಮ ಪಕ್ಷದಲ್ಲಿ ಸಾಕಷ್ಟು ನಾಯಕರಿದ್ದಾರೆ.

# ಈ ಬಾರಿ ಬಿಜೆಪಿಯ ಅಮಿತ್ ಷಾ ರಾಜ್ಯದಲ್ಲಿ ಬಂದು ಕೂರ್ತಾರೆ, ಬಿಜೆಪಿಯ ಮುಖ್ಯಮಂತ್ರಿಗಳೆಲ್ಲ ರಾಜ್ಯಕ್ಕೆ ಬಂದು ಪ್ರಚಾರ ಮಾಡ್ತಿದಾರಲ್ಲ…

-ಎರಡೂ ರಾಷ್ಟ್ರೀಯ ಪಕ್ಷಗಳ ಕಣ್ಣು ಕುಮಾರಸ್ವಾಮಿ ಮೇಲಿದೆ. ಕುಮಾರಸ್ವಾಮಿ 18 ತಿಂಗಳು ಸಿಎಂ ಆಗಿದ್ದಾಗ ಮಾಡಿದ ಕೆಲಸ, ಬಿಜೆಪಿಯ ಬಿಎಸ್​ವೈ ಆಡಳಿತ ಮತ್ತು ಸಿದ್ದರಾಮಯ್ಯನವರು ಮಾಡಿದ ಕೆಲಸವನ್ನು ಜನರು ವಿಮರ್ಶೆ ಮಾಡಿದ್ದಾರೆ. ಯಾರೆಲ್ಲ ಬರುತ್ತಾರೆ ಬರಲಿ. ಜನರ ಹೃದಯದಲ್ಲಿ ಕುಮಾರಸ್ವಾಮಿಗೆ ಮತ ನೀಡಬೇಕೆಂಬ ಭಾವನೆ ಬಂದಾಗ ತಂತ್ರಗಾರಿಕೆಗಳೆಲ್ಲ ಕೆಲಸ ಮಾಡುವುದಿಲ್ಲ. ನನ್ನ 55 ವರ್ಷದ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಮೂರುವರೆ ವರ್ಷ ಕೇಂದ್ರದಲ್ಲಿ ಮೋದಿ ಆಡಳಿತವನ್ನು ಜನ ನೋಡಿದ್ದಾರೆ. 10 ವರ್ಷಗಳ ಯುಪಿಎ ಆಡಳಿತ, ನನ್ನ 10 ತಿಂಗಳ ಆಡಳಿತ ಜನ ನೋಡಿದ್ದಾರೆ.

# ಉಪಚುನಾವಣೆಯಲ್ಲಿ ಅಭ್ಯರ್ಥಿನೇ ಹಾಕಲಿಲ್ಲ, 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸ್ತೀರಾ?

-224 ಕ್ಷೇತ್ರಗಳಲ್ಲಿ ಕಾಂಗ್ರೆಸ್​ನವರು ಗೆಲ್ತಾರೇನ್ರಿ. ಬಿಜೆಪಿಯವರು ಗೆಲ್ತಾರೇನ್ರಿ. ನಾವು 150 ಕ್ಷೇತ್ರಗಳಲ್ಲಿ ತುಂಬ ಗಂಭೀರವಾಗಿ ಕೆಲಸ ಮಾಡುತ್ತೇವೆ. ಉಳಿದ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತೇವೆ.

ಇನ್ನು ಸಿದ್ದರಾಮಯ್ಯ 123 ಸ್ಥಾನ ಗೆದ್ದಿದ್ದು, ಅವರ ರಾಜಕೀಯ ಶಕ್ತಿಯಿಂದಲ್ಲ, ಹಣದ ಪ್ರಭಾವದಿಂದ. ಸಿದ್ದರಾಮಯ್ಯ ಹತ್ತಿರ ಹಣದ ಶಕ್ತಿ ಎಷ್ಟಿದೆ ಎಂದು ಜಗತ್ತಿಗೆ ಗೊತ್ತಿದೆ. ನಾನು ಹೇಳಿದ್ದೆಲ್ಲ ಸತ್ಯ ಎಂದು ಜನರು ತಿಳ್ಕೊಳ್ತಾರೆ ಎಂದು ಒಬ್ಬ ರಾಜಕಾರಣಿ ಭಾವಿಸಿದ್ರೆ ಅದು ಅವರ ಭ್ರಮೆ. ರಾಜಕಾರಣಿಗೆ ಎರಡೇ ಕಣ್ಣಿರೋದು, ಆದರೆ ಸಾವಿರಾರು ಕಣ್ಣುಗಳು ರಾಜಕಾರಣಿಗಳನ್ನು ನೋಡುತ್ತಿರುತ್ತವೆ.

# ಸಿದ್ದರಾಮಯ್ಯ ಬಳಿ ಅಷ್ಟೊಂದು ಹಣದ ಶಕ್ತಿ ಇದೆಯಾ?

-ಅಯ್ಯೋ ರಾಮ, ಕಲೆಕ್ಷನ್ ಏನಾಗ್ತಿದೆ, ಯಾರಿಗೆ ಬೇಕ್ರಿ ಇದು, ಇವರ ಅಡಳಿತದಲ್ಲಿ ಏನೇನಾಗಿದೆ ಎಂದು ಗೊತ್ತಿದೆ. ಅರ್ಕಾವತಿ ಬಡಾವಣೆ ಪ್ರಕರಣದ ಬಗ್ಗೆ ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ. ಏಕೆ ಅದನ್ನು ಬಿಡುಗಡೆ ಮಾಡಬಾರದು? ನೈಸ್ ವರದಿ ಏನಾಯ್ತು? ಎಸಿಬಿ ಮಾಡಿ, ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿಟ್ಟಿದ್ದಾರೆ. ಅವರ ಮಗನ ಮೇಲಿನ ಪ್ರಕರಣವನ್ನೇ ಕ್ಲಿಯರ್ ಮಾಡ್ಸಿದ್ದಾರಲ್ಲ, ಕ್ಲೀನ್​ಚಿಟ್ ಕೊಟ್ರಲ್ಲ. ಬಿಡಿಎನಲ್ಲಿ ಏನಾಯ್ತು? ಬಿಡಿಎ ಆಯುಕ್ತರನ್ನು ಕೆಪಿಎಸ್ಸಿ ಚೇರ್ವೆನ್ ಮಾಡಿದ್ರು.

# ಸಮೀಕ್ಷೆಗಳೆಲ್ಲ ಸಮ್ಮಿಶ್ರ ಸರ್ಕಾರ ಬರುತ್ತೆ ಎಂದು ಹೇಳುತ್ತಿವೆ. ಈ ಬಗ್ಗೆ ಏನು ಹೇಳ್ತೀರಿ?

-ಜೆಡಿಎಸ್ ಸತ್ತೇ ಹೋಯ್ತು ಎಂದು ಸಿದ್ದರಾಮಯ್ಯ ಹೇಳಿದ್ರು, ಆಮೇಲೆ ಎರಡೇ ಜಿಲ್ಲೆ ಅಂದ್ರು. ಈಗ ಐದಾರು ಜಿಲ್ಲೆ ಎಂದು ಹೇಳುತ್ತಿದ್ದಾರೆ. ಇನ್ನೊಂದು ತಿಂಗಳಾದ್ಮೇಲೆ ಎಷ್ಟು ಜಿಲ್ಲೆಯಲ್ಲಿ ಜೆಡಿಎಸ್ ಇದೆ ಎಂದು ಹೇಳುತ್ತಾರೆ ನೋಡೊಣ.

# ಈಗ ಜೆಡಿಎಸ್ 33 ಶಾಸಕರಿಂದ 113ಕ್ಕೆ ಏರುವುದು ಸಾಧ್ಯವೇ? ಅತಂತ್ರವಾದರೆ…?

-ನಾನು ಸೋತಿದ್ದೆ, ಸಿದ್ದರಾಮಯ್ಯನವರೂ ಸೋತಿದ್ರು, ಆಮೇಲೆ ಜೆಡಿಎಸ್ 58 ಸ್ಥಾನ ಗೆದ್ದಿಲ್ವೆ, ಮುಂದೆ ಏನಾಗುತ್ತೆ ಕಾದು ನೋಡಿ. ‘ಅತಂತ್ರವಾದರೆ ನಾನು ಯಾರ ಜತೆ ಹೊಗೊಲ್ಲ. ವಿರೋಧಪಕ್ಷದಲ್ಲಿ ಕೂರುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅದನ್ನೇ ಹೇಳುತ್ತೇನೆ. ಎರಡು ಪಕ್ಷಗಳ ಜತೆ ಹೋಗಿ ಶಿಕ್ಷೆ ಅನುಭವಿಸಿದ್ದೇವೆ. ನನ್ನ ಮಗ ಬಿಜೆಪಿ ಜತೆ ಹೋಗಿ ಏನು ನೋವು ಅನುಭವಿಸಿದ ಎಂಬುದು ನನಗೆ ಗೊತ್ತಿದೆ, ಕಾಂಗ್ರೆಸ್ ಜತೆ ಹೊಗಿ ಏನಾಯ್ತು ಎಂದು ಗೊತ್ತಿದೆ. ನಾನು ಹುಟ್ಟು ಹೋರಾಟಗಾರ, ಯಾರ ಜತೆಯೂ ರಾಜಿ ಮಾಡಿಕೊಳ್ಳಲ್ಲ.

# ಅನಿತಾ ಕುಮಾರಸ್ವಾಮಿ ನನ್ನ ಸಹೋದರಿ, ಅವರು ನಿಮ್ಮನ್ನು ನಂಬಿಕೊಂಡು ಬಂದಿದ್ದಾರೆ’ ಎಂದು ಡಿಕೆಶಿ ಹೇಳಿದ್ದಾರಲ್ಲವೇ?

-ಇಂತಹ ಮಾತುಗಳನ್ನು ನಂಬುವಷ್ಟು ಮೌಢ್ಯತೆ ನಮಗಿದೆಯಾ? ಪ್ರತಿದಿನದ ಬೆಳವಣಿಗೆ ನಾನು ನೋಡುತ್ತಿರುತ್ತೇನೆ. ನಾವು ಹೋರಾಟ ಮಾಡೊದು ನಿಜ. ನಾಡಿನ ಜನತೆ ಏನು ತೀರ್ಪು ಕೊಡುತ್ತಾರೆ ಕಾದು ನೋಡೊಣ.

# ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆಯಾ, ಯಾವಾಗ ಬಿಡುಗಡೆ ಮಾಡುತ್ತೀರಾ?

-ಕುಮಾರಸ್ವಾಮಿ ಪ್ರತಿಯೊಂದು ಜಿಲ್ಲೆಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಕೆಲವು ಕಡೆ ಸಾಕಷ್ಟು ಪೈಪೋಟಿ ಇದೆ. ನಾನೇ ಪಟ್ಟಿ ಬಿಡುಗಡೆಗೆ ತಡೆ ನೀಡಿದ್ದೇನೆ. ಕೆಲವು ಕಡೆ ಇರುವ ಗೊಂದಲವನ್ನು ಪರಿಹರಿಸಬೇಕು ಎಂದು ಹೇಳಿದ್ದೇನೆ. ಅಲ್ಲದೆ ಪಟ್ಟಿ ಬಿಡುಗಡೆ ಮಾಡಿದ್ರೆ ಬೇರೆ ಪಕ್ಷದವರು ನಮ್ಮ ಪ್ರಬಲ ಅಭ್ಯರ್ಥಿಗಳನ್ನು ಸೆಳೆಯುವ ಸಾಧ್ಯತೆ ಇದೆ ಹೀಗಾಗಿ ಪಟ್ಟಿ ಬಿಡುಗಡೆಗೆ ವಿಳಂಬ ಮಾಡುತ್ತಿದ್ದೇವೆ.

# ಮಹದಾಯಿ ನೀರಿನ ವಿಚಾರವಾಗಿ ಇತ್ತೀಚಿಗಿನ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

-ಪ್ರಾಮಾಣಿಕವಾಗಿ ಹೇಳುವುದಾದರೆ ಕೆಲವು ತಪ್ಪುಗಳು ನಡೆದಿವೆ, ಆರಂಭದಲ್ಲೇ ಎಡವಿದ್ದಾರೆ.

ಮಾಜಿ ಪ್ರಧಾನಿಯಾದ ನೀವು ಮಹದಾಯಿ ವಿಚಾರವಾಗಿ ಏಕೆ ಮಧ್ಯಸ್ಥಿಕೆ ವಹಿಸಬಾರದು? -ನಾನು ಏನು ಮಾಡಲಿ? ಕಾವೇರಿ ವಿಚಾರವಾಗಿ ನಿರ್ವಹಣಾ ಮಂಡಳಿ ರಚನೆ ಮಾಡಲು ಮುಂದಾದರು, ಆಗ ಧರಣಿ ಕೂತೆ. ಆದರೆ ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣ ಇನ್ನೂ ತೀರ್ಪು ಕೊಟ್ಟಿಲ್ಲ. ರಾಜ್ಯ ಸರ್ಕಾರ ಅರ್ಜಿ ಹಾಕಿ ದಿನನಿತ್ಯ ವಿಚಾರಣೆ ನಡೆಸಿ ಒಂದು ತೀರ್ಮಾನ ಕೊಡಿ ಎಂದು ನ್ಯಾಯಾಧೀಕರಣವನ್ನು ಕೇಳಬೇಕು.

# ಪ್ರಜ್ವಲ್ ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಇಚ್ಛೆ ಹೊಂದಿದ್ದಾರೆ. ಅವರಿಗೆ ವಿಧಾನ ಸಭೆಗೆ ಟಿಕೆಟ್ ನೀಡುತ್ತೀರಾ? ಅನಿತಾ ಕಥೆಯೇನು?

-ಪ್ರಜ್ವಲ್​ಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತುಂಬ ಆಸೆ ಇತ್ತು. ಆದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡೊದು ಬೇಡ ಎಂದು ಹೇಳಿದ್ದೇನೆ. ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ವಲ್ಪ ಅನುಮಾನವಿದೆ. ಏಕೆಂದರೆ ಇಲ್ಲಿ ಅನಿತಾ ಕುಮಾರಸ್ವಾಮಿ ನಿಲ್ಲುವಂತೆ ಸಾಕಷ್ಟು ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಏನು ಮಾಡಬೇಕೆಂದು ಯೋಚಿಸುತ್ತಿದ್ದೇನೆ.

# ನಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಚಾರಸಭೆಗಳಲ್ಲಿ ತುಂಬ ಲಘುವಾಗಿ ಮಾತನಾಡಿದ್ದಾರೆ. ಆ ಬಗ್ಗೆ ಏನು ಹೇಳ್ತೀರಾ?

-ಅವರ ಮಾತಿಗೆ ಪುರಸ್ಕಾರ ಸಿಕ್ಕಿದ್ರೆ ನನಗೆ ಸಂತೋಷ. ಸಿದ್ದರಾಮಯ್ಯನವರ ನಡವಳಿಕೆ ಏನೆಂದು ನನಗೆ ಗೊತ್ತಿದೆ. ಕಾಲ ಬಂದಾಗ ಅದೆಲ್ಲ ಹೊರಬರುತ್ತೆ. ಸಿದ್ದರಾಮಯ್ಯನವರು ಆತ್ಮಸಾಕ್ಷಿಯಾಗಿ ಹೇಳಲಿ, ದೇವೆಗೌಡರು ಏನು ದ್ರೋಹ ಮಾಡಿದ್ದಾರೆ ಎಂದು. ನಾನು ಪ್ರಧಾನಿಯಾಗಿ ಹೋದಾಗ ತನ್ನನ್ನು ಸಿಎಂ ಮಾಡಬಹುದಿತ್ತು ಎಂಬುದು ಅವರ ಸಿಟ್ಟು. ಜೆ.ಎಚ್. ಪಟೇಲ್​ರನ್ನು ತಪ್ಪಿಸಿ ಅವರನ್ನು ಸಿಎಂ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ಪಟೇಲ್ ಅವರನ್ನು ಬಿಟ್ಟು, ಸಿದ್ದರಾಮಯ್ಯನವರನ್ನು ಹೇಗೆ ಸಿಎಂ ಮಾಡಲಿ, ಅದು ಸಾಧ್ಯವಿಲ್ಲ ಎಂದು ಹೇಳಿದ್ದೆ. ಅದೊಂದೇ ಅವರಿಗೆ ಸೇಡು.

# ಶೃಂಗೇರಿಯಲ್ಲಿ ರುದ್ರಯಾಗ ಮಾಡಿಸಲು ಏನು ಕಾರಣ?

-ನನ್ನ ಪತ್ನಿ ಚೆನ್ನಮ್ಮನವರ ಮೇಲೆ ಮಹಾಶಿವರಾತ್ರಿ ದಿನ ಆಸಿಡ್ ದಾಳಿಯಾಯ್ತು. ಅದರಿಂದ ತುಂಬ ನೊಂದಿದ್ದೆ. ಹಿಂದಿನ ಜನ್ಮದಲ್ಲಿ ನಾನು ಈಶ್ವರನ ಭಕ್ತರಿಗೆ ನೋವಾಗುವ ರೀತಿಯಲ್ಲಿ ನಡ್ಕೊಂಡಿರಬಹುದು, ಹೀಗಾಗಿ ನನ್ನ ಮಕ್ಕಳನ್ನು ಕರೆದು ನಾನು, ‘ನಿಮ್ಮ ತಾಯಿ ಬದುಕಿದ್ದಾಗ ಶತ ರುದ್ರಯಾಗ ಮಾಡಿಸಿ’ ಎಂದು ಹೇಳಿದ್ದೆ. ಜನರು ಏನು ಬೇಕಾದ್ರು ಮಾತಾಡಲಿ, ನನ್ನ ನಂಬಿಕೆ ನಾನು ಮಾಡಿಸುತ್ತೇನೆ.

# ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟಿದೆ, ಇದರ ಬಗ್ಗೆ ಏನು ಹೇಳ್ತೀರಾ?

-ರಾಜ್ಯದ ಮುಖ್ಯಮಂತ್ರಿ ಆದವರು, ತಮ್ಮ ಇಬ್ಬರು ಮಂತ್ರಿಗಳನ್ನು ಇದಕ್ಕಾಗಿ ಮೀಸಲಾಗಿಟ್ಟಿರುವುದು, ನಾನು ಹಿಂದೆ ನೋಡಿರಲಿಲ್ಲ. ದೇವರಾಜು ಅರಸು ಅವರು ಎರಡು ಜಾತಿಗಳ ವಿರುದ್ದ ಎಲ್ಲ ಕೂಟವನ್ನು ಕಟ್ಟಿದ್ದರು. ಆದರೆ ಅವರು ಸಮಾಜವನ್ನು ಒಡೆಯಲು ಹೋಗಿರಲಿಲ್ಲ. ಅದಕ್ಕೇ ಬಿಜೆಪಿಯ ಅಮಿತ್ ಷಾ ಅವರಿಗಿಂತಲೂ ಸಿಎಂ ಸಿದ್ದರಾಮಯ್ಯ ಚಾಣಾಕ್ಷ ಎಂದು ಹೇಳಿದ್ದೇನೆ. ಇಂಥವರು ಮುಂದೆ ಹುಟ್ಟುತ್ತಾರೊ ಇಲ್ವೊ ಗೊತ್ತಿಲ್ಲ.

#  ಸಿದ್ದರಾಮಯ್ಯನವರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು?

-ಹಿಂದಿನ ಸರ್ಕಾರಗಳಿಗೆ ಹೋಲಿಸಿ ನೋಡಿದಾಗ ನನ್ನ ಮನಸ್ಸಿಗೆ ನೋವಾಗುತ್ತೆ. ಸಿದ್ದರಾಮಯ್ಯ ಈ ಮಟ್ಟಕ್ಕೆ ಹೊಗುತ್ತಾರೆ ಎಂದು ಗೊತ್ತಿರಲಿಲ್ಲ. ಎಲ್ಲ ಸಂಸ್ಥೆಗಳನ್ನು ನಾಶ ಮಾಡಿದ್ದಾರೆ. ಕೆಪಿಎಸ್ಸಿ ಹೊಯ್ತು , ಬಿಡಿಎ ನಾಶ ಆಯ್ತು, ಲೋಕಾಯುಕ್ತ ಹೋಯ್ತು, ಒಬ್ಬ ಗೃಹ ಸಚಿವರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಸಮಾಜದ ಅಧಿಕಾರಿಯನ್ನು ಇಟ್ಟುಕೊಂಡು ಗೃಹ ಇಲಾಖೆಯಲ್ಲಿ ಚದುರಂಗ ಆಟ ಆಡುತ್ತಿದ್ದಾರೆ. 12 ಮಂದಿಯನ್ನು ರಾಜಕೀಯ ಕಾರ್ಯದರ್ಶಿಯನ್ನು ಮಾಡಿದ್ರು. ಇದರ ಅವಶ್ಯಕತೆ ಏನಿತ್ತು? ಅಧಿಕಾರ ಉಳಿಸಿಕೊಳ್ಳಲು ಕೀಳುಮಟ್ಟಕ್ಕೆ ಹೋಗಿದ್ದಾರೆ. 125 ನಿಗಮ ಮಂಡಳಿ ಮಾಡಿದ್ದಾರೆ. ಎಲ್ಲರಿಗೂ ಕಾರು ನೀಡಿದ್ದಾರೆ. ರಾಜ್ಯದ ಹಿತದೃಷ್ಟಿಯಿದ್ದರೆ ಹೀಗೆ ಮಾಡ್ತಾರಾ? 12 ಮಂದಿಯನ್ನು ಕಾರ್ಯದರ್ಶಿ ಮಾಡಿದ್ದಾರಲ್ಲ, ಅವರೆಲ್ಲ ಏನು ಕೆಲಸ ಮಾಡುತ್ತಿದ್ದಾರೆ? ನಾನು ಸಿಎಂ ಆಗಿದ್ದಾಗ ಮಂತ್ರಿಗಳ ಮನೆಯ ಒಂದು ಕರ್ಟನ್ ತೆಗೆಯಲು ಬಿಡಲಿಲ್ಲ. ನನ್ನ ಕಾಲದಲ್ಲಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನದಂದು ಮಾತ್ರ ಜಾಹೀರಾತು ನೀಡಲು ಸೂಚಿಸಿದ್ದೆ. ಇದೆಲ್ಲಾ ಮಕ್ಕಳ ಆಟವಾ…?

# ಕೇಂದ್ರದ ಬಿಜೆಪಿ ನಾಯಕರು ದೇವೆಗೌಡರ ಜತೆ ಮೃದುಧೋರಣೆ ತಳೆಯುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಇದೆಯಲ್ಲ…

-ನಾನು ನಾಲ್ಕು ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಕದ್ದುಮುಚ್ಚಿ ಭೇಟಿ ಮಾಡಿಲ್ಲ, ಒಮ್ಮೆ ಮಹದಾಯಿ ವಿಚಾರವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡಿದ್ದೇನೆ. ಇತ್ತೀಚೆಗೆ ಲೋಕಸಭೆಯಲ್ಲಿ ಸೋನಿಯಾ ಗಾಂಧಿಯವರು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿ ಪ್ರೀತಿ, ವಿಶ್ವಾಸದಿಂದ ಮಾತನಾಡಿದ್ರು. ನಾನು ಸಿದ್ದರಾಮಯ್ಯ ಅವರ ಹಾಗೆ ಯಾರ ಬಗೆಗೂ ಲಘುವಾಗಿ ಮಾತನಾಡಲ್ಲ, ಸೌಜನ್ಯವಾಗಿ ನಡೆದುಕೊಳ್ಳುತ್ತೇನೆ. ಹಾಗೆಯೇ ನಾನಾಗೇ ಅವರ ಮೇಲೆ ಏಕೆ ಟೀಕೆ ಮಾಡಲಿ? ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ನಾನು ವಿಚಾರಗಳ ಮೇಲೆ ಮಾತನಾಡುತ್ತೇನೆ, ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡೊಲ್ಲ.
  • Blogger Comments
  • Facebook Comments

0 comments:

Post a Comment

Item Reviewed: ಜೆಡಿಎಸ್ ‌ಅಭಿಮಾನಿಗಳು ‌ಓದಲೇ ‌ಬೇಕಾದ ‌ದೇವೇಗೌಡರ ‌ವಿಶೇಷ ‌ಸಂದರ್ಶನ Rating: 5 Reviewed By: Farhan Rasheed
Scroll to Top