Tuesday, 31 October 2017

ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದರಲ್ಲಾಗಲೀ, 'ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ; ಜಲವೆಂದರೆ ಕೇವಲ ನೀರಲ್ಲ, ಅದು ಪಾವನ ತೀರ್ಥ' ಎಂದು ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಬರೆದಿದ್ದರಲ್ಲಾಗಲೀ ಖಂಡಿತ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ಕನ್ನಡ ಭಾಷೆಗಿರುವ ಮಹತ್ವವೇ ಅಂಥದ್ದು.ಇನ್ನೊಂದೇ ದಿನ! ಮತ್ತೆ ಕನ್ನಡದ ಹಬ್ಬ ರಾಜ್ಯೋತ್ಸವ ಮನೆ-ಮನಕ್ಕೆ ಅಡಿ ಇಡುತ್ತಿದೆ. ಕನ್ನಡ ಭಾಷಿಕರ ಒಕ್ಕೂಟದಿಂದ ಕರ್ನಾಟಕವೆಂಬ ರಾಜ್ಯ ಸ್ಥಾಪನೆಯಾಗಿದ್ದು ನವೆಂಬರ್ 1, 1956 ರಲ್ಲಿ. ಅಂದಿನಿಂದ ಪ್ರತಿವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಕನ್ನಡಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸೇರಿದಂತೆ, ಈ ದಿನ ಕನ್ನಡಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ, ಸುಮಾರು ಎರಡೂವರೆ ಸಹಸ್ರಮಾನಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಸಂಗತಿಗಳನ್ನು ಸ್ಮರಿಸುವುದು ಸಂದರ್ಭೋಚಿತ.

ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ವಿಶ್ವದ ನಾನಾ ಪ್ರದೇಶಗಳಲ್ಲಿ ಸಿಕ್ಕ ಅಚ್ಚ ಕನ್ನಡ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸಿವೆ.

ಕನ್ನಡ ಭಾಷೆ ಎರಡೂವರೆ ಸಹಸ್ರಮಾನದಷ್ಟು ಹಳೆಯದು! 2500 ವರ್ಷಗಳ ಹಿಂದೇ ಕನ್ನಡ ಭಾಷೆಯ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಅಲೆಕ್ಸಾಂಡರ್ ಕಾಲದಲ್ಲಿ ಅಂದರೆ ಕ್ರಿ.ಪೂ.4 ನಾಲ್ಕನೇ ಶತಮಾನದಲ್ಲಿ ಸಿಕ್ಕ ತಾಳೆಗರಿಯೊಂದರಲ್ಲಿ ಕನ್ನಡದ 'ಊರಲ್ಲಿ' ಎಂಬ ಶಬ್ದ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತಾದರೂ ಆ ತಾಳೆಗರಿಗಳನ್ನು ಸುಟ್ಟಿದ್ದರಿಂದ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯವೊಂದು ನಾಶವಾಗಿತ್ತು.

ಫರ್ಡಿನೆಂಡ್ ಕಿಟೆಲ್ ಕನ್ನಡ ಶಬ್ದಕೋಶ ರಚಿಸಿದ್ದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ವಿಷಯ. ಆದರೆ ಹೀಗೆ ವಿದೇಶಿಯರೊಬ್ಬರು ಭಾರತೀಯ ಪ್ರಾದೇಶಿಕ ಭಾಷೆಯೊಂದರ ಶಬ್ದಕೋಶ ರಚಿಸಿದ್ದು ಕನ್ನಡದಲ್ಲಿ ಮಾತ್ರ ಎಂಬುದು ಕನ್ನಡದ ಹೆಗ್ಗಳಿಕೆಗೆ ಮೇರುಗರಿ!

ಅಮೋಘವರ್ಷ, 'ಕವಿರಾಜಮಾರ್ಗ' ರಚಿಸುವಾಗ ಇಂಗ್ಲೀಷ್ ಭಾಷೆಯಿನ್ನೂ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ!

ಕನ್ನಡ ಭಾಷೆ ಮತ್ತು ವರ್ಣಮಾಲೆ ತಾರ್ಕಿಕ ಮತ್ತು ವೈಜ್ಞಾನಿಕವಾಗಿಯೂ 99.99 ಪ್ರತಿಶತ ಪರಿಪೂರ್ಣವಾದುದು ಎಂಬುದು ಸಾಬೀತಾಗಿದೆ.

ವಿಶ್ವದ ಲಿಪಿಗಳ ರಾಣಿ ಎಂದರೆ ಕನ್ನಡ ಲಿಪಿ ಎಂದು ಶ್ರೀ ವಿನೋಭಾ ಭಾವೆಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠತೆಗೆ ಸಾಕ್ಷಿ.

ಸಾಹಿತ್ಯಕ್ಕಾಗಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಭಾರತೀಯರೆಂದರೆ ಅದು ಕುವೆಂಪು. ಅಂದರೆ ಕನ್ನಡ ಸಾಹಿತ್ಯದಿಂದಾಗಿಯೇ ಜಗದ ಕವಿ, ಯುಗದ ಕವಿ ಕುವೆಂಪು ಅವರು ಈ ಗೌರವ ಪಡೆದರು.

ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ಎಂದರೆ ಕನ್ನಡ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ವಿ.ಕೃ.ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಈ ಎಂಟು ಜನ ಸಾಹಿತ್ಯದ ಬೇರೆ ಬೇರೆ ಪ್ರಾಕಾರಗಳಲ್ಲಿ ಕೃಷಿ ಮಾಡಿ ಕನ್ನಡಕ್ಕೆ ಗರಿಷ್ಠ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು.

ಚಾರಿಯಟ್ ಮೈಮ್ ಎಂಬ ಎರಡನೇ ಶತಮಾನದ ಗ್ರೀಕ್ ನಾಟಕವೊಂದು ಕನ್ನಡ ಸಾಲನ್ನು ಉಪಯೋಗಿಸಿದೆ. ಅಂದರೆ ಎರಡನೇ ಶತಮಾನದಷ್ಟು ಹಿಂದೆಯೇ ಕನ್ನಡ ಭಾಷೆ ಗ್ರೀಸ್ ದೇಶದವರೆಗೂ ಲಗ್ಗೆಯಿಟ್ಟಿತ್ತು ಎಂದಾಯ್ತು
  • Blogger Comments
  • Facebook Comments

0 comments:

Post a Comment

Item Reviewed: ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ! Rating: 5 Reviewed By: Farhan Rasheed
Scroll to Top