Thursday, 13 April 2017

ಡಾ ।। ಅಂಬೇಡ್ಕರ್ ಈ ಹೆಸರು ಕೇಳದ ಭಾರತೀಯನಿಲ್ಲ !!!

ಡಾ ।। ಅಂಬೇಡ್ಕರ್ ಹೆಸರು ಕೇಳದ ಭಾರತೀಯನಿಲ್ಲ ಮತ್ತು ಹೆಸರು ಬಳಸದೆ ಗೆದ್ದು ಬಂದ ರಾಜಕಾರಣಿಗಳು ಇಲ್ಲವೇ ಇಲ್ಲ.


ನಮ್ಮ ದೇಶಕ್ಕೆ ಸ್ವತಂತ್ರ ಬಂದ ಸಂದರ್ಭದಲ್ಲಿ ಪ್ರಬುದ್ಧ, ಸುಶಿಕ್ಷಿತ ಮತ್ತು ಯೋಗ್ಯತೆ ಅರ್ಹತೆ ಹೊಂದಿದ್ದ ಕೆಲವೇ ಕೆಲವು ಮಹನೀಯರಲ್ಲಿ ಡಾ ।। ಅಂಬೇಡ್ಕರ್ ಪ್ರಮುಖರು. ಸಂವಿಧಾನ ರಚನಾ ಮಡಳಿಯೆಂಬ ದೋಣಿಯನ್ನು ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ತಂದು ನಿಲ್ಲಿಸಿದ 'ಅಂಬಿಗ' ಡಾ ।। ಅಂಬೇಡ್ಕರ್ ಎಂದರೆ ಅತಿಶಯೋಕ್ತಿಯಲ್ಲ. ಸಂವಿಧಾನ ರಚನಾ ಮಂಡಳಿಯ ಮುಖ್ಯಸ್ಥರಾದ ನಂತರ ತಮಗೆ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರಿಗೆ ಭಾರತೀಯರೆಲ್ಲರೂ ಸಹ ಋಣಿಗಳಾಗಿರುವುದು ಸುಳ್ಳಲ್ಲ (ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ). ಯಾವುದೇ ಮೀಸಲಾತಿ ಇಲ್ಲದಿದ್ದ ಸಂದರ್ಭದಲ್ಲಿ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೂ ಬೀದಿ ದೀಪದ ಕೇಳಗೆ ಓದಿ ಕಷ್ಟಗಳ ನಡುವೆ ಪಡೆದ ವಿದ್ಯಾಭ್ಯಾಸ ಅವರಲ್ಲಿ ಇದ್ದ ಹಠ-ಛಲ ಮತ್ತು ಅವರಿಗಾದ ಅವಮಾನ ಜೊತೆಗೆ ಅವರಿಲ್ಲಿದ್ದ ವಿದ್ಯೆಯ ಬಗೆಗಿನ ಅಪಾರ ಹಂಬಲ ಅವರನ್ನು ಹಿಂದುಳಿಯಲು ಬಿಡದೆ ಯಶಸ್ಸಿನೆಡೆಗೆ ಕೊಂಡೊಯ್ದು ಯಶಸ್ವಿ ಮಹಾನ್ ವ್ಯಕ್ತಿಯನ್ನಾಗಿಸಿತ್ತು. ಅಂದಿನ ಬ್ರಿಟಿಷ್ ಆಡಳಿತವಾದಿ ಮತ್ತು ಜಾತಿಪದ್ಧತಿಯ ನಡುವೆ ಅನುಭವಿಸಿದ ಕಷ್ಟ ನೋವುಗಳು ಸ್ವತಂತ್ರ ಭಾರತದ ಪ್ರಜೆಗಳಿಗೆ ಬಾರದಿರಲಿ ಎಂಬ ಸದುದ್ದೇಶದಿಂದ ಅವರು ಅತೀ ಜಾಗರೂಕತೆಯಿಂದ ರಚಿಸಿದ ಸಂವಿಧಾನ ಎಲ್ಲಾ ವರ್ಗದ ಸಮಸ್ತ ಪ್ರಜೆಗಳಿಗೂ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಅನುಕೂಲ ಕಲ್ಪಿಸಿದ್ದರು.

ಭಾರತೀಯರು ಯಾವುದೇ ವ್ಯಕ್ತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.ಡಾ ।। ಅಂಬೇಡ್ಕರ್ ಅವರನ್ನು ನಮ್ಮ ಜನರು ಒಪ್ಪಿಕೊಳ್ಳುವ ಜೊತೆಗೆ ಅಪ್ಪಿಕೊಂಡು ಆರಾಧಿಸುತ್ತಿದ್ದಾರೆ. ದೇಶಾದ್ಯಂತ ನಗರ ಹಳ್ಳಿಗಳೆನ್ನದೆ ಎಲ್ಲೆಡೆಯೂ ಅವರ ಪ್ರತಿಮೆಗಳು ಕಂಡುಬರುತ್ತವೆ. ಪ್ರತಿಮೆಗಳನ್ನು ಕಂಡ ಮಕ್ಕಳು ಯಾರೆಂದು ಕೇಳಿದರೆ ಅವರನ್ನು ನಮ್ಮವರು ಎಂದು ಹೇಳುತ್ತಾರೆ ವಿನಹ ಅವರು ದಲಿತರು ಎಂದಾಗಲಿ ಅಥವಾ ಅವರು ನಮ್ಮ ಜಾತಿಯಲ್ಲ ಎಂದಾಗಲಿ ಯಾರೂ ಹೇಳುವುದಿಲ್ಲ. ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸುವವರ ವಿರುದ್ಧ ಹೋರಾಡಿದರು. ಕುಡಿಯುವ ನೀರಿಗಾಗಿ ಊರಿನ ಪ್ರಮುಖ ಬಾವಿಗಳನ್ನು ಮುಟ್ಟದಂತೆ ಇದ್ದ ಸನ್ನಿವೇಶದಲ್ಲಿ ಬಹುಸಂಖ್ಯಾತರ ಆರ್ಭಟದ ನಡುವೆಯೇ ಕುಡಿಯುವ ನೀರು ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ ಡಾ ।। ಅಂಬೇಡ್ಕರ್.

ಡಾ ।। ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲದೆ ಅವರೊಬ್ಬ ಉತ್ತಮ ಅರ್ಥಶಾಸ್ತ್ರಜ್ಞರು ವಕೀಲರು ಸಹ ಆಗಿದ್ದರು. ಭಾರತದಲ್ಲಿ ಇಂದು ಚುನಾವಣೆಯಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಯ ಜನರು ಸ್ಪರ್ಧಿಸುತ್ತಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಡಾ ।। ಅಂಬೇಡ್ಕರ್. ಮೀಸಲಾತಿಗಾಗಿ ಅವರು ಅಂದು ದೇಶಾದ್ಯಂತ ಅಪಾರ ಸಂಖ್ಯೆಯ ಬಹುಸಂಖ್ಯಾತ ಹಿಂದುಗಳ ವಿರೋಧವನ್ನು ಎದುರಿಸಬೇಕಾಗಿತ್ತು ಮತ್ತು ದೇಶಾದ್ಯಂತ ಅಪಾರ ಪ್ರಮಾಣದ ವಿರೋಧಿಗಳನ್ನು ಸೃಷ್ಠಿಸಿಕೊಂಡರು.
ಸ್ವತಂತ್ರ ನಂತರ ರಚನೆಯಾದ ಸರ್ಕಾರದಲ್ಲಿ ಕಾನೂನು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇಷ್ಟೊಂದು ಗುರುತಿಸಲ್ಪಟ್ಟ ವ್ಯಕ್ತಿಯ ಹೆಸರು ಇಂದು ರಾಜಕೀಯವಾಗಿ ರಾಜಕೀಯ ಪಕ್ಷಗಳು ಮತ್ತು ಸ್ವಾರ್ಥಕ್ಕಾಗಿ ರಾಜಕೀಯ ಮುಂಖಡರು ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿ. ಡಾ ।। ಅಂಬೇಡ್ಕರ್ ರಚಿಸಿದ ಕಾನೂನು ಕಟ್ಟಳೆಗಳು ಕಾಲಕಾಲಕ್ಕೆ ತಿದ್ದುಪಡಿಯಾಗದೆ ನಿಷ್ಪ್ರಯೋಜಕವಾಗಿ ಭ್ರಷ್ಟರಿಗೆ ಮತ್ತು ತಪ್ಪುಮಾಡಿ ತಪ್ಪಿಸಿಕೊಳ್ಳುವವರಿಗೆ ವರದಾನವಾಗಿರುವುದು ನನ್ನ ಪ್ರಕಾರ ಡಾ ।। ಅಂಬೇಡ್ಕರ್ ಎಂಬ ಮಹಾನ್ ಚೇತನಕ್ಕೆ ಮಾಡುತ್ತಿರುವ ಅವಮಾನ.

ಫರ್ಹಾನ್ ರಶೀದ್, ಸಂಸ್ಥಾಪಕ - ಕ.com
  • Blogger Comments
  • Facebook Comments

0 comments:

Post a Comment

Item Reviewed: ಡಾ ।। ಅಂಬೇಡ್ಕರ್ ಈ ಹೆಸರು ಕೇಳದ ಭಾರತೀಯನಿಲ್ಲ !!! Rating: 5 Reviewed By: Farhan Rasheed
Scroll to Top