Sunday, 9 April 2017

ಹತ್ತು ರೂಪಾಯಿ ನೋಟನ್ನು ಹೇಗೆ ಖರ್ಚು ಮಾಡುವುದು?


ವಿವೇಕನಿಗೆ ಬೆಳ್ಳಗೆ ಎದ್ದಾಗಿನಿಂದಲೂ ಒಂದೇ ಯೋಚನೆ .ಆ ಹತ್ತು ರೂಪಾಯಿ ನೋಟನ್ನು ಹೇಗೆ ಖರ್ಚು ಮಾಡುವುದು? ಯಾರಿಗೆ ಕೊಡುವುದು ? ಅಷ್ಟಕ್ಕೂ ಆ ನೋಟಿನ ಬಗ್ಗೆ ಅಷ್ಟೊಂದು ಯೋಚನೆ ಏಕೆ ಮಾಡುತಿದ್ದ ಎಂದರೆ ಆ ನೋಟಿನಲ್ಲಿದ ಗಾಂಧಿ ತಾತನಿಗೆ ಎಷ್ಟು ವಯಸ್ಸಾಗಿತೋ ಅದಕ್ಕೂ ಅಷ್ಟೇ ವಯಸ್ಸಾಗಿತು.ಅಂಚುಗಳ್ಳಲ್ಲಿ ತೂತು ಬಿದ್ದಿತು ,ಮಧ್ಯ ಗೆರೆಯ ಬಳಿ ತೇಪೆ ಹಾಕಲಾಗಿತ್ತು ,ಕಮಟು ಎಣ್ಣೆಯಲ್ಲಿ ಕರಿದ ಕಜ್ಜಾಯದ ಹಾಗೆ ಕೈಗೆ ಅಂಟುತಿತ್ತು.ಇಂತಹ ವಾನಪ್ರಸ್ಥಾಶ್ರಮ ಸೇರಿದ ನೋಟು ತನ್ನ ಬಳಿ ಹೇಗೆ ಬಂದು ಸೇರಿತು ಎಂಬುದೇ ಅವನ ಯೋಚನೆಯ ಕೇಂದ್ರಬಿಂದುವಾಗಿತ್ತು.ಈ ಬಗ್ಗೆ ಯೋಚಿಸುವಾಗ ಹಿಂದಿನ ಎರಡು ದಿನಗಳ Flashback ಅನ್ನು ಪುನಃ ಪುನಃ Rewind ಮಾಡಿಕೊಂಡು ತಾನು ಮಡಿದ ಎಲ್ಲ ಖರ್ಚುಗಳನ್ನು ವಿವರವಾಗಿ ಲೆಕ್ಕ ಹಾಕುತಿದ್ದ.

ಅವನ ಯೋಚನಾ ಲಹರಿ ಹೀಗೆ ಸಾಗುತ್ತಿತ್ತು .ಗುರುವಾರ ಮಧ್ಯಾಹ್ನ ಬೆಲ್ ಸರ್ಕಲ್ ಬಳಿ ಎರಡು ಪರೋಟ ತಿಂದು ಜಾಲಹಳ್ಳಿ ಕ್ರಾಸ್ ನಲ್ಲಿರುವ ರೂಮಿಗೆ ನೇರವಾಗಿ ಬಂದೆ.ಪರೋಟಗೆ ೩೦ ರೂ ಚಿಲ್ಲರೆ ನಾನೇ ಸರಿಯಾಗಿ ಕೊಟ್ಟೆ . ಬಸ್ ಪಾಸ್ ಇರುವುದರಿಂದ ಬಸ್ ಅಲ್ಲಿ  ಟಿಕೆಟ್ ತೇಗಿಸುವ ಅಗತ್ಯ ಇರಲಿಲ್ಲ .ಸಂಜೆವರೆಗೂ ರೂಮಿನಲ್ಲಿ ಮಲಗಿದ್ದೆ . ಸುಮಾರು ೫ ಗಂಟೆ ಹೊತ್ತಿಗೆ ನೀರಿನ ಹುಡುಗ ಬಂದು ಎರಡು ಕ್ಯಾನ್ ನೀರು ಕೊಟ್ಟು ಹೋದ .ಅವನಿಗೆ ಐವತ್ತು ರೂ ಕೊಟ್ಟಾಗ ಅವನು ಈ ನೊಟ್ಟನು ಕೊಟ್ಟನೇ ? ...ಛೇ..ಇಲ್ಲ ..ಅವನು ಚಿಲ್ಲರೆ ಕೊಡದೆ ಮುಂದಿನ ಸಾರಿ ಬಂದಾಗ ಕಡಿಮೆ ಕೊಡಿ ಎಂದು ಖಾಲಿ ಕ್ಯಾನ್ ತೆಗೆದುಕೊಂಡು ಹೊರಟುಹೋದ.ಅಲ್ಲಿಗೆ ಮೊನ್ನೆ ಸಂಜೆವರುಗೂ ಈ ನೋಟು ನನ್ನ ಬಳಿ ಇರಲಿಲ್ಲ ಎಂದಹಾಗಾಯಿತು.ಸಂಜೆ ವಿಜಯ್ ರೂಮಿಗೆ ಬಂದಾಗ ಹೊಸದಾಗಿ ಬಂದಿರುವ ದರ್ಶನ ಸಿನಿಮಾ ನೋಡೋಣ ಎಂದು ನಿರ್ಧರಿಸಿ ಮೆಜೆಸ್ಟಿಕ್ ಕಡೆ ಹೊರಟೆವು.ಆ ರೂಟಿನಲ್ಲಿ ಬಸ್ ಪಾಸ್ ನಡೆಯುವುದಿಲ್ಲವಾದ್ದರಿಂದ ಟಿಕೆಟ್ ತೆಗಿಸಬೇಕು.ಇಬ್ಬರಿಗೂ ಸೇರಿ ಟಿಕೆಟ್ ತೆಗಿಸೋಣ ಎಂದು ನಾನೇ ಕಂಡಕ್ಟರ್ ಬಳ್ಳಿ ನೂರು ರೂ ನೋಟನ್ನು ನೀಡಿ "ಎರಡು ಮೆಜೆಸ್ಟಿಕ್  ಕೊಡಿ" ಎಂದು ಕೇಳಿದೆ .ಅವನು "ಒಂದೇ  ಮೆಜೆಸ್ಟಿಕ್ ಸಾರ್ ಇರೋದು !" ಎಂದು ಓಬಿರಾಯನ ಕಾಲದ ಜೋಕ್ ಹೇಳಿ ಕಣ್ಣು ಹೊಡೆದ.ತನ್ನ ಜೋಕಿಗೆ ತಾನೇ ನಗುತ್ತ ಟಿಕೆಟ್ ಹಾಗು ಬಾಕಿ ಚಿಲ್ಲರೆ ೬೦ ರೂ ನೀಡಿದ.ಬಸ್ಸಿನಲ್ಲಿ ತುಂಬಾ ರಶ್ ಇದ್ದಿದ್ದರಿಂದ ಮತ್ತೆ ಪರ್ಸ್ ಅನ್ನು ಹೊರಕ್ಕೆ ತೆಗೆಯಲು ಆಗಲಿಲ್ಲ. ಸರಿ ಎಂದು ದುಡ್ಡನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡೆ.

Talkies ನಲ್ಲಿ ಹಣ ಕೊಡುವಾಗ ಪುರ್ಸಿನಿಂದ ತೆಗೆದು ಕೊಟ್ಟೆ.ಇನ್ನು Pop-corn, Maaza ರಾತ್ರಿ ಊಟ ಎಲ್ಲದಕ್ಕೂ ವಿಜಯನೇ ಹಣ ನೀಡಿದ್ದರಿಂದ ಮತ್ತೆ ಪುರ್ಸನ್ನಾಗಲಿ, ಜೇಬನ್ನಾಗಲಿ ಮುಟ್ಟುವ ಪ್ರಮೇಯ ಬರಲಿಲ್ಲ.

ಸಿನಿಮಾ ಭರ್ಜರಿಯಾಗಿತ್ತು ,ದರ್ಶನ ಹೇಳಿದ ಸಂಭಾಷಣೆಗಳು,ಚಿಕ್ಕಣ್ಣ ಹೇಳಿದ ಜೋಕ್ಗಳು ,ನಾಯಕಿಯ ಗ್ಲಾಮರ್ ,ಇನ್ನು ಏನೇನು ಚೆನ್ನಾಗಿತು ? ಯಾವುದನ್ನೂ ಬದಲಾಯಿಸಬೇಕಿತ್ತು ಎಂದು ವಿಮಶಕರ ಧಾಟಿಯಲ್ಲಿ ಮಾತಾಡುತ್ತ  ಬರುವಾಗ ಮಧ್ಯರಾತ್ರಿ ದಾಟಿತ್ತು.

ಬೆಳ್ಳಿಗೆ B.B.M.P ಕಸದ ಗಾಡಿಯವರು  ಬಾರಿಸುವ ಗಂಟೆ ಸದ್ದಿಗೆ ಎಚ್ಚರವಾಯಿತು.ನಮ್ಮ ಬೀದಿಯಲ್ಲಿ ಹಸಿ ಕಸ ಒಣ ಕಸ ಬೇರ್ಪಡಿಸಿ ಹಾಕುವ  ಏಕೈಕ ಮನೆ ನಮದಾದ್ದರಿಂದ ಆ ಹುಡುಗನೊಂದಿಗೆ ಕೊಂಚ ಸ್ನೇಹ ಸಲುಗೆ ಇತ್ತು .ಕಸ ಹಾಕುವಾಗ ಅವನು ತಿಂಗಳ ಭಕ್ಷೀಸನ್ನು ಕೇಳಿದ.ಅವನಿಗೆ ಸರಕಾರವಾಗಲಿ ,ನಗರಪಾಲಿಕೆಯಾಗಲಿ ಸರಿಯಾದ ಸಂಬಳ ,ಸವಲತು ನೀಡುತಿರಲಿಲ್ಲ ಆದರೂ ಅವನು ವಾರಕ್ಕೆ ಮೂರು ದಿನ ಸರಿಯಾದ ಸಮಯಕ್ಕೆ  ಬಂದು ಕಸ ವಿಲೇವಾರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾನೆಂದು ಅವನಿಗೆ  ತಿಂಗಳಿಗೊಂದು ಬಾರಿ ಐವತ್ತೋ ನೂರೋ ಕೊಡುವುದು ರೂಢಿಯಾಗಿತ್ತು.ಅವನು ಕೇಳಿದಾಗ ಪುರ್ಸ್ನಲ್ಲಿ ಚಿಲ್ಲರೆ ಸಿಗಲಿಲ್ಲ .ನೆನ್ನೆ ಸಂಜೆ ಬಸ್ನಲ್ಲಿ ಕಂಡಕ್ಟರ್  ನೀಡಿದ ೬೦ ರೂ ಹಣ ನೆನಪಿಗೆ ಬಂದು ಅದನ್ನು ತೆಗೆದುಕೊಂಡು ಬಂದು ಆ ಹುಡುಗನಿಗೆ ನೀಡಿದೆ.ಅದರಲ್ಲಿ ಅವನು ಐವತ್ತು ರೂ ಇಟ್ಟುಕೊಂಡು ೧೦ ರೂ ವಾಪಸು ನೀಡಿದ.ಏಕೆ ಎಂದು ಸರಿಯಾಗಿ ನೋಡಿದಾಗ ಆ ನೋಟು ತನ್ನ ಜೀವಿತಾವಧಿಯ ಕೊನೆ ಅಂಚಿನಲ್ಲಿತ್ತು.ನೆನ್ನೆ ದಿನ ಬಸ್ಸಿನಲ್ಲಿ ಸರಿಯಾಗಿ ನೋಡಬೇಕಾಗಿತ್ತು ಎಂದು ಅನಿಸಿದರೂ ಆ ಹುಡುಗನ ಮುಂದೆ ತೋರಿಸಿಕೊಳ್ಳದೆ "ಇವನಿಗೆ ಎಷ್ಟು ಕೊಬ್ಬು ?" ಎಂದು ಗೊಣಗುತ್ತ ಮನೆ ಒಳಗೆ ಬಂದೆ.

ಯಾವಾಗಲು ವಜ್ರಮುನಿಯನ್ನು ಮೈಮೇಲೆ ಆವಾಹಿಸಿಕೊಂಡಂತೆ ಇರುವ ಬಸ್ ಕಂಡಕ್ಟರ್ ಅಂದು ಯಾಕೆ ಧೀರೇಂದ್ರ ಗೋಪಾಲ್ ರೀತಿ ಜೋಕ್ ಹೇಳಿ ನಗಿಸಿದ ಎಂದು ಈಗ ಅರ್ಥವಾಯಿತು.ಹತ್ತರ ನೋಟನ್ನು ಐವತ್ತರ ನೋಟಿನೊಳಗೆ ಇತ್ತು ಕಂಡಕ್ಟರ್ ಯಾಮಾರಿಸಿದ್ದ.ಟೋಪಿ ಹಾಕಿಸಿಕೊಂಡಿದ್ದಾಯಿತು ,ಇನ್ನು ಆ ಟೋಪಿಯನ್ನು ಬೇರೆಯವರ ತಲೆಗೆ ವರ್ಗಾಯಿಸಬೇಕು.ಅದರ ಬಗ್ಗೆ ಯೋಚನೆ ಶುರುಮಾಡಿದ.

ಟೀ ಮಾರುವ ಗುಜರಾತಿ ಹುಡುಗ ,ವಡಾ ಪಾವ್ ಎನ್ನುವ ಮರಾಠಿ ಹುಡುಗ ,ಸಿಗರೇಟ್ ಮಾರುವ ಮಲೆಯಾಳಿ ,ಪಾನಿ ಪುರಿ ಮಾರುವ ಬಿಹಾರಿ ಬಾಬು ,ಹಳಸಿದ ಪಫ್ ಮಾರುವ ಬೇಕರಿ ಅಯ್ಯಂಗಾರಿ ,ಕೊನೆಗೆ ಹೂ ಮಾರುವ ಬಟ್ಲರ್ ಇಂಗ್ಲಿಷ್ ಅಜ್ಜಿ ಕೂಡ ಆ ನೊಟ್ಟನು ಮೂಸಿ ನೋಡಲಿಲ್ಲ.ಇವರೆಲ್ಲರೂ ವಯಸ್ಸಾದ ಗಾಂಧಿ ತಾತನನ್ನ  ನಿರಾಕರಿಸಿದಾಗ ಅವನಿಗೆ  ಹಣಕ್ಕೂ ಆಕಾರದ ಅವಶ್ಯಕತೆ ಇದೆ ಎಂದು ಮನವರಿಕೆ ಆಯಿತು .ವ್ಯಕ್ತಿತ್ವ ವಿಕಸನ ಕೇಂದ್ರದ Mr.ರಾವ್  ನೂರು ರೂ ನೋಟನ್ನು ಮುದುರಿ ,ನೆಲದಲ್ಲಿ ಉಜ್ಜಿ ಆಕಾರ ವಿಕಾರ ಮಾಡಿ ಇದಕೆ ಈಗಲೂ ಎದೆ ಬೆಲೆ ಎಂದು ಹೇಳಿದಾಗ ಜ್ಞಾನೋದಯವದಂತೆ ಭಾವಿಸಿ ಖುಷಿ ಪಟ್ಟಿದ್ದ .ಆದರೆ ಈಗ ಹತ್ತು ರೂ ನೋಟಿಗೆ ಆ ತತ್ವ ಅನ್ವಯಿಸುತ್ತಿಲ್ಲವಲ್ಲ ಅನಿಸುವ ಹೊತ್ತಿಗೆ ವ್ಯಕ್ತಿಗೆ ಆಗಲಿ ವಸ್ತುವಿಗೆ ಆಗಲಿ ಬೆಲೆ ಹೆಚ್ಚಿಗೆ ಇದ್ದಷ್ಟು ಅಂಟಿದ ಕೊಳೆ ಸಮಾಜಕ್ಕೆ ಕಾಣುವುದಿಲ್ಲ ಎಂದು ಮತೊಮ್ಮೆ ಜ್ಞಾನೋದಯವಾಯಿತು.ಆ ನೋಟು ಎರಡನೇ ದಿನವೂ ಅವನಲ್ಲಿಯೇ  ಉಳಿಯಿತು.

ಈ ಹೊಸ ಜ್ಞಾನೋದಯದ ಜೊತೆ ಸ್ವಲ್ಪ ಪುಣ್ಯವು ಬರಲಿ ಶನಿವಾರ ಸಂಜೆ ವೆಂಕಟೇಶ್ವರನ ವೆಂಕಟೇಶ್ವರನ ದೇವಸ್ಥಾನಕ್ಕೆ ಹೊರಟ .ಜೊತೆಯಲ್ಲಿ ವಿಜಯನನ್ನು ಹೊರಡಿಸಿದ. ದೇವರಲ್ಲಿ ಭಕ್ತಿಗಿಂತ ಅಪಾರವಾದ ಬೇಡಿಕೆಗಳನ್ನುಹೊತ್ತು ತಂದಿದ್ದ ಜನಸಮೂಹ ಹನುಮಂತನ ಬಾಲದಷ್ಟು ಉದ್ದ ಇತ್ತು .ಇಷ್ಟು ದೂರ ಬಂಡ ಮೇಲೆ ದೇವರಿಗೆ ಮುಖ ತೋರಿಸದೆ ಹಾಗೆ ಹೋದರೆ ಅವನಿಗೂ ಬೇಜಾರು ಆಗಬಹುದು ಎಂಬ ಕಾರಣಕ್ಕೆ ಕ್ಯೂ ನಲ್ಲಿ ನಿಂತರು .ನಿಜ ಹೇಳಬೇಕೆಂದರೆ ಸಕ್ಕರೆ ಪೊಂಗಲ್ ಪ್ರಸಾದದ ಆಸೆ ಅವರನ್ನು  ಕ್ಯೂ ನಲ್ಲಿ ನಿಲ್ಲಿಸಿತು .ಪ್ರಪಂಚದ ಎಲ್ಲಾ ಆಗುಹೋಗುಗಳ್ಳನ್ನು ,ವಿಚಾರಗಳ್ಳನ್ನು ಪರಿಣಾಮಕಾರಿಯಾಗಿ ಚರ್ಚೆ ಮಾಡುವುದಕ್ಕೆ ಅದು ಪ್ರಶಸ್ತವಾದ ಜಾಗ.ಅಲ್ಲಿ ನಿಂತಿದ್ದ ಬಹುತೇಕ ಜನರು ರಾಜಕೀಯ ,ಕ್ರಿಕೆಟ್ ,ಅಮೇರಿಕಾ ,ಚೀನಾ ,ಸಾಫ್ಟ್ವೇರ್ ,ಹಾರ್ಡ್ವೇರ್ ,ಆರ್ಗಾನಿಕ್ ಫುಡ್ ಇತ್ಯಾದಿ ಎಲ್ಲಾ ವಿಷಯಗಳ  ಬಗ್ಗೆ ತಮ್ಮ ತಮ್ಮ ಜ್ಞಾನಭಂಡಾರಗಳ್ಳನು ಪ್ರದಶನಕ್ಕಿಟ್ಟಿದ್ದರು.ಅವರು ಬಂದಿರುವುದು ದೇವಸ್ಥಾನಕ್ಕೆ ಎಂಬುದು ಮರೆತುಹೋಗುವಷ್ಟರಲ್ಲಿ ದೇವರ ಮುಂದೆ ನಿಂತಿದ್ದರು.

ದೇವರಿಗೆ ಪುಷ್ಪಾಲಂಕಾರವನ್ನು ಮಾಡಿದ್ದರು .ಮಂಗಳಾರತಿ ನಡೆಯುತಿತ್ತು.ತಟ್ಟೆಯಲ್ಲಿ ಬಿದ್ದಿದ ಚಿಲ್ಲರೆ ಮತ್ತು ರಾಶಿ ರಾಶಿ ನೋಟುಗಳ್ಳನು ನೋಡಿ ನನಗೊಂದು  ಯೋಚನೆ ಬಂತು .ಎಲ್ಲಾರು ನಿರಾಕರಿಸುತಿರುವ ಗಾಂಧಿ ತಾತನನ್ನು ತಟ್ಟೆಯಲ್ಲಿ ಹಾಕಿ ಕ್ಷಮಿಸು ಎನ್ನುವಂತೆ ಕೈ ಮುಗಿದೆ.ಆ ನೋಟಿನಿಂದ ಬಿಡುಗಡೆ ಸಿಕ್ಕಿತು ಮತ್ತು ದೇವರಿಗೆ ಕಾಣಿಕೆ ಹಾಕಿದ ಪುಣ್ಯವು ಬಂತು ಎಂದು ಹಿಗ್ಗಿದೆ .ಆಗ ಅವನ ಹೆಗಲ ಮೇಲೆ ಹಿಂದಿನಿಂದ ಒಂದು ಕೈ ಬಿತ್ತು .ಒಂದು ಕ್ಷಣ ಗಾಬರಿಯಾದರೂ ತೋರ್ಪಡಿಸದೆ ಹಿಂದೆ ತಿರುಗಿದ. ಹಿಂದೆ ನಿಂತಿದ್ದ ವ್ಯಕ್ತಿ ಐನೂರು ರೂಪಾಯಿ ನೋಟು ನೀಡಿ ಏನೋ ಹೇಳಿದ. ಆ ಸದ್ದು ಗದ್ದಲದಲ್ಲಿ ಇವನಿಗೂ ಸರಿಯಾಗಿ ಕೇಳಲಿಲ್ಲ.ಹಿಂದೆ ನಿಂತಿದ್ದ ವ್ಯಕ್ತಿಗೆ ಮಂಗಳಾರತಿ ತಟ್ಟೆ ಎಟುಕುತಿರಲಿಲ್ಲವಾದ್ದರಿಂದ ತನಗೆ ದಕ್ಷಿಣ ಹಾಕಲು ಹಣ ಕೊಟ್ಟಿದ್ದನೆಂದು ಭಾವಿಸಿ ಮಂಗಳಾರತಿ ತಟ್ಟೆಯಲ್ಲಿ ಹಣ ಹಾಕಿದ.

ತಾನು ಹತ್ತು ರೂಪಾಯಿ ನಷ್ಟವಾಗುತ್ತದೆ ಎಂದು ಎರಡುದಿಂದ ಯೋಚಿಸಿ ಕಡೆಗೆ ದಾರಿ ಕಾಣದೆ ದೇವರಿಗೆ ಹಾಕಿರುವಾಗ ಈ ವ್ಯಕ್ತಿ ಐನೂರು ರುಪೆಯಿ ದಕ್ಷಿಣೆ ಹಾಕಿದ್ದಾನೆ ಎಂದರೆ ಅವನ ಭಕ್ತಿ ಎಂತಹದ್ದು ,ಅವನ ಸಂಪಾದನೆ ಎಷ್ಟಿರಬಹುದು ಎಂದೆಲ್ಲ ಯೋಚಿಸಿ ಹೊರಗೆ ಬಂದು ಪ್ರದಕ್ಷಿಣೆ ಹಾಕುವಾಗ ದುಡ್ಡು ಕೊಟ್ಟ ಆ ವ್ಯಕ್ತಿ ಎದುರಾದರು .

"ಸರ್, ನಿಮ್ಮದು ತುಂಬಾ ದೊಡ್ಡ ಮನಸ್ಸು" ಎಂದು ಇವನೇ ಮುಂದಾಗಿ ಮಾತನಾಡಿಸಿದ.

ಇವನು ಯಾವ ಗ್ರಹದ ಜೀವಿ ಎಂಬಂತೆ ಅವನು ಇವನ್ನನು ಆಶ್ಚರ್ಯದಿಂದ್ದ ದಿಟ್ಟಿಸಿ ನೋಡಿದ .

"ನನ್ನ ಗುರುತು ಸಿಗಲಿಲ್ಲ ಎಂದು ಕಾಣುತ್ತೆ, ಅದೇ ನೀವು ಮಂಗಳಾರತಿ ತಟ್ಟೆಯಲ್ಲಿ ಹಾಕು ಎಂದು ಐನೂರು ರೂಪಾಯಿ ನೀಡಿದಿರಲ್ಲ " ವಿವೇಕ ತಡವರಿಸುತ್ತಲೇ ಹೇಳಿದ .

ಆ ವ್ಯಕ್ತಿ "ಅಯ್ಯೋ  ,ಅದು ನನ್ನ ದುಡ್ಡು ಅಲ್ಲ ,ನಿಮ್ಮ ಪ್ಯಾಂಟ್ ಜೇಬಿನಿಂದ ಜಾರಿ ಹೊರಬಿದ್ದಿತು ,ಎತ್ತಿ ಕೊಟ್ಟೆ ಅಷ್ಟೇ " ಎಂದು ಹೇಳಿ ಹೊರಟು ಹೋದ .

ಈಗ ಆಶ್ಚರ್ಯ ಪಡುವ ಸರದಿ ಇವನದಾಗಿತ್ತು .ಹರಿದ ಹತ್ತು ರೂಪಾಯಿ ಯನ್ನು ದೇವರಿಗೆ ಕೊಟ್ಟು ಕೈ ತೊಳೆದು ಕೊಳ್ಳಬೇಕು ಎಂದುಕೊಂಡವನಿಂದ ಆ ಎಡುಕೊಂಡಲವಾಡ ಐವತು ಪಟ್ಟು ಹೆಚ್ಚಿಗೆ ವಸೂಲಿ ಮಾಡಿದ್ದ.

ಪ್ರಸಾದದ ಸರತಿ ಸಾಲಿನಲ್ಲಿ ಸಕ್ಕರೆ ಪೊಂಗಲ್ ಹಂಚುತಿದ್ದರೂ ದೇವರ ತನ್ನ ಸ್ಪೆಷಲ್ ಭಕ್ತನಿಗೆ ಹಲ್ವಾ ಪ್ರಸಾದವನ್ನು ಸರಿಯಾಗಿ ತಿನ್ನಿಸಿದ್ದ

ಈ ಬ್ಲಾಗ್ ಬರೆದವರು - ಭರತ್ ಜಿ - ಕ.com ಫ್ರೀಲಾನ್ಸ ಬ್ಲಾಗರ್ - ಮೈಸೂರು 
  • Blogger Comments
  • Facebook Comments

0 comments:

Post a Comment

Item Reviewed: ಹತ್ತು ರೂಪಾಯಿ ನೋಟನ್ನು ಹೇಗೆ ಖರ್ಚು ಮಾಡುವುದು? Rating: 5 Reviewed By: Farhan Rasheed
Scroll to Top